ಶ್ರೀನಿವಾಸ ಅಯ್ಯಂಗಾರ್, ಚಿಕ್ಕಮಗಳೂರು ನಾರಾಯಣ ಅಯ್ಯಂಗಾರ್
	1901-72. ಪ್ರಖ್ಯಾತ ಗಣಿತ ಸಂಶೋಧಕ, ಬೋಧಕ ಮತ್ತು ಲೇಖಕ. ಸಂಸ್ಕøತ ವಾಲ್ಮೀಕಿ ರಾಮಾಯಣವನ್ನು ಕನ್ನಡಕ್ಕೆ ಪದಶಃ ಸರಳ ಅನುವಾದ ಮಾಡಿದ ಮಾರ್ಗ ಪ್ರವರ್ತಕ ಮತ್ತು ಆಧುನಿಕ ಕನ್ನಡ ವಿಜ್ಞಾನ ವಾಙ್ಮಯದ ಅಭಿವರ್ಧನೆಗೆ ಅಪಾರ ಸೇವೆ ಸಲ್ಲಿಸಿದ ಹಿರಿಚೇತನ. ಸಿಎನ್‍ಎಸ್ ಎಂದೇ ಖ್ಯಾತನಾಮರು. ಚಿಕ್ಕಮಗಳೂರು ಜಿಲ್ಲೆಯ ಕನ್ನೇಹಳ್ಳಿಯಲ್ಲಿ 1901 ಫೆಬ್ರವರಿ 21ರಂದು ಜನಿಸಿದರು. ಮನೆಯಲ್ಲಿ ಶಾಸ್ತ್ರೋಕ್ತ ವ್ರತಾದಿಗಳ ಆಚರಣೆ, ಶಾಲೆಯಲ್ಲಿ ಸಾಂಪ್ರದಾಯಿಕ ಶಿಕ್ಷಣ, ಜೊತೆಗೆ ಅಂದಿನ ವಿದ್ಯಾಭ್ಯಾಸ ಪದ್ಧತಿ ಅನುಸಾರ ಲೋವರ್ ಸೆಕೆಂಡರಿ ತರಗತಿಗೆಂದು ಐಚ್ಛಿಕ ವಿಷಯವಾಗಿ ಸಂಸ್ಕøತ ಪಾಠ - ಹೀಗೆ ಇವರ ವಿದ್ಯಾಭ್ಯಾಸ ನಡೆಯಿತು. ಸಂಸ್ಕøತ ಪಠ್ಯವಾಗಿ ಯೋಜಿತವಾಗಿದ್ದ ರಾಮಾಯಣದ ಸುಂದರಕಾಂಡದಲ್ಲಿಯ ನಾಲ್ಕು ಸರ್ಗಗಳ ಅಭ್ಯಾಸ ಇವರ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು.  

	ಇವರ ಒಲವು ಗಣಿತದ ಕಡೆಗೆ. 1916ರಲ್ಲಿ ಮೈಸೂರು ಸಂಸ್ಥಾನದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಇಡೀ ಸಂಸ್ಥಾನಕ್ಕೆ ಮೂರನೆಯ ಸ್ಥಾನ ಗಳಿಸಿದರು. ಬೆಂಗಳೂರು ಸರ್ಕಾರಿ ಕೊಲಿಜಿಯಟ್ ಪ್ರೌಢಶಾಲೆಯಲ್ಲಿ ಪ್ರವೇಶ ತರಗತಿ ಮತ್ತು 1917ರಲ್ಲಿ ಪ್ರವೇಶ ಪರೀಕ್ಷೆ ಮುಗಿಸಿ ಸ್ನಾತಕ ವ್ಯಾಸಂಗಕ್ಕಾಗಿ ಸೆಂಟ್ರಲ್ ಕಾಲೇಜನ್ನು ಸೇರಿದರು. ಉನ್ನತವ್ಯಾಸಂಗಕ್ಕೆ ಗಣಿತವನ್ನು ಆರಿಸಿಕೊಂಡರು. ಅಂದಿನ ಮೈಸೂರು ಸಂಸ್ಥಾನದಲ್ಲಿ ಗಣಿತ ಸ್ನಾತಕೋತ್ತರ ಅವಕಾಶವಿಲ್ಲದುದರಿಂದಲೂ ಮದರಾಸು ವಿಶ್ವವಿದ್ಯಾಲಯದಲ್ಲಿ ಮೈಸೂರು ವಿದ್ಯಾರ್ಥಿಗಳಿಗೆ ಸುಲಭಸ್ಥಾನ ಗಳಿಕೆಯಿಲ್ಲದ್ದರಿಂದಲೂ ದೂರದ ಕೋಲ್ಕತ ನಗರಕ್ಕೆ ಗಣಿತದ ಎಮ್.ಎಸ್ಸಿ ಪದವಿಗಾಗಿ ತೆರಳಬೇಕಾಯಿತು. ಪ್ರತಿಭಾಶಾಲಿ ವಿದ್ಯಾರ್ಥಿ ಯಾಗಿದ್ದ ಕಾರಣ ಮೈಸೂರು ಸಂಸ್ಥಾನ ಇವರಿಗೆ ರೂ 50 ಮಾಸಿಕ ವೇತನ ಕೊಡಮಾಡಿತು. ಆಗ ಕೋಲ್ಕತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಆಶುತೋಷ ಮುಖರ್ಜಿ ಎಂಬ ಮೇಧಾವಿಯ ನೇತೃತ್ವದಲ್ಲಿ ಅದೊಂದು ಉನ್ನತ ಬೌದ್ಧಿಕ ಕೇಂದ್ರವಾಗಿತ್ತು. ಆ ಸಮಯದಲ್ಲಿ ಅನಾರೋಗ್ಯ ಪೀಡಿತರಾದಾಗಲೂ ಎದೆಗುಂದದೆ ಇವರು ಕೋಲ್ಕತ ವಿಶ್ವವಿದ್ಯಾಲಯ ಆ ತನಕ ತನ್ನ ಇತಿಹಾಸದಲ್ಲೇ ಕಂಡಿರದಂಥ ಗರಿಷ್ಠ ಅಂಕ ಸಾಧನೆ ಯೊಂದಿಗೆ ಪ್ರಥಮ ದರ್ಜೆ ಗಳಿಸಿದ್ದರು. 

	ತರುವಾಯ ಇವರು ಅಧ್ಯಾಪಕರಾಗಿ ಮೈಸೂರಿಗೆ ಬಂದರು (1923). ಇವರು  ಎಷ್ಟು ಗಣಿತ ವಿಷಯ ಕೇಂದ್ರೀಕೃತರಾಗಿದ್ದರೆಂದರೆ, ಇವರ ಸ್ಪಷ್ಟ ಮಾತುಗಾರಿಕೆ ಹಾಗೂ ವಿಷಯವನ್ನು ಮುಟ್ಟಿಸುವ ರೀತಿಯೆಲ್ಲ ಗಣಿತ ಪ್ರಮೇಯಗಳಂತೆ ಸಿದ್ಧವಾಕ್ಯಗಳೇ ಆಗಿದ್ದುವು. ನಿಷ್ಠಾವಂತ ಬೋಧನೆಯೂ ವಿದ್ಯಾರ್ಥಿಗಳ ವಿಚಾರ ದಲ್ಲಿದ್ದ ಪರಮಸಹಿಷ್ಣು ತೆಯೂ ಇವರನ್ನೊಬ್ಬ ಆದರ್ಶ ಶಿಕ್ಷಕನನ್ನಾಗಿ ರೂಪಿಸಿದ್ದುವು. ಇದಾದ ಮರುವರ್ಷವೇ ಇವರಿಗೆ ಅಸಿಸ್ಟೆಂಟ್ ಪ್ರೊಫೆಸರಾಗಿ ಬಡ್ತಿ ದೊರಕಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವರ್ಗವೂ ಆಯಿತು. 1923ರಲ್ಲಿ ಮದುವೆಯಾಯಿತು. ಅದೇ ವರ್ಷ ಇಂಡಿಯನ್ ಆಡಿಟ್ಸ್ ಅಂಡ್ ಅಕೌಂಟ್ಸ್ ಪರೀಕ್ಷೆಯ ನಾಗರಿಕ ವಿಭಾಗದ ಪರೀಕ್ಷೆಯಲ್ಲಿ ಎರಡನೆಯ ಸ್ಥಾನ ಗಳಿಸಿದರೂ ಹುದ್ದೆ ಖಾಲಿಯಿರಲಿಲ್ಲವಾಗಿ, ಕಾಲೇಜು ಅಧ್ಯಾಪನವೇ ಗಟ್ಟಿಯಾಯಿತು. 1928ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಗಣಿತ ಸ್ನಾತಕೋತ್ತರ ತರಗತಿಗಳನ್ನು ಪ್ರಾರಂಭಿಸಿದಾಗ ಅಲ್ಲಿಯ ತರಗತಿಗಳು ಇವರ ಗಣಿತಜ್ಞಾನ ಹರಿತಗೊಳ್ಳಲು ಅದಮ್ಯ ಉತ್ಸಾಹವೂ ಕೂಡಿಬಂತು. 

	ಅನಂತರ ಇವರ ಸಂಶೋಧನ ಪ್ರಬಂಧ ಸಿದ್ಧವಾಯಿತು. ಪರಾಮರ್ಶೆ ಗಾಗಿ ಕೋಲ್ಕತ ವಿಶ್ವವಿದ್ಯಾಲಯಕ್ಕೆ ಅರ್ಪಿತವೂ ಆಯಿತು. ಅದನ್ನು ಮೌಲ್ಯಮಾಪನಕ್ಕೊಳಪಡಿಸಿದವರು ಎ.ಆರ್.ಫರ್ಸೈತ್, ಡಿ.ಇ.ಲಿಟ್ಲ್‍ವುಡ್ ಮತ್ತು ಇ.ಟಿ.ವ್ಹಿಟೇಕರ್ ಎಂಬ ಅಂತಾರಾಷ್ಟ್ರೀಯ ಖ್ಯಾತಿಯ ಗಣಿತ ವಿದ್ವಾಂಸರು. ಅದೊಂದು ಅತ್ಯಂತ ಮೌಲಿಕವಾದ ಸಂಶೋಧನಕಾರ್ಯ ಎಂದು ಘೋಷಿಸಿದ ತ್ರಿಸದಸ್ಯರ ಮೌಲ್ಯಮಾಪನ ಸಮಿತಿ ಅದಕ್ಕೆ ಪಿಎಚ್.ಡಿ. ಬದಲು ಡಿ.ಎಸ್‍ಸಿ. (ಡಾಕ್ಟರ್ ಆಫ್ ಸೈನ್ಸ್) ಎಂಬ ಪದವಿ ಪ್ರದಾನಿಸಲು ಶಿಫಾರಸು ಮಾಡಿತು. ಅಲ್ಲಿಂದ ಮುಂದಕ್ಕೆ ಇವರು ಗಣಿತಪ್ರಿಯ ವಿದ್ಯಾರ್ಥಿಗಳ, ಮೇಧಾವಿಗಳ ಒಂದು ಗುಂಪನ್ನೇ ಹುಟ್ಟುಹಾಕಿ ಸದಾ ಚರ್ಚೆ, ನಿಬಂಧ ಮಂಡನೆ, ಬರೆವಣಿಗೆ, ಸಂಶೋಧನೆ ಎಂದು ತೊಡಗಿದರು. ಇವರು ಪ್ರಧಾನವಾಗಿ ಮಾಡಿದ ಗುರುತರ ಕೆಲಸವೆಂದರೆ ಅಲ್ಲಿ ಇಲ್ಲಿ ಹರಿದು ಹಂಚಿಹೋಗಿದ್ದ ಹಲವಾರು ಗಣಿತ ವಿಷಯ ಸಾಮಗ್ರಿಗಳನ್ನು ಶೋಧಿಸಿದ್ದು ಹಾಗೂ ನಶಿಸಿಹೋಗಿದ್ದ ಹಲವಾರು ಗಣಿತ ವೈಶಿಷ್ಟ್ಯಗಳನ್ನು ಹೆಕ್ಕಿ ಒಂದು ಶಾಸ್ತ್ರೀಯ ಚೌಕಟ್ಟಿನಲ್ಲಿ ಬಂಧಿಸಲು ಪ್ರಯತ್ನಿಸಿದ್ದು. ಇದರ ಫಲವಾಗಿ ಮೂಡಿಬಂದದ್ದೇ ಹಸ್ತಪ್ರತಿಯಲ್ಲಿ “ಗಣಿತಶಾಸ್ತ್ರದ ಚರಿತ್ರೆ” (1945). ಇದನ್ನು 1955ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿತು. ಈ ಗ್ರಂಥದ ಪೂರ್ವಾರ್ಧ ಗಣಿತದ ಸಮಗ್ರ ಇತಿಹಾಸದ ಸಂಕ್ಷಿಪ್ತವರದಿಯನ್ನೂ ಉತ್ತರಾರ್ಧ ಭಾರತಕ್ಕೆ ಸಂಬಂಧಿಸಿದಂತೆ ಇದೇ ಇತಿಹಾಸದ ವರದಿಯನ್ನೂ ಒಳಗೊಂಡಿದೆ. ಇದನ್ನೆ ಇಂಗ್ಲಿಷ್‍ನಲ್ಲಿ ಏನ್ಶಿಯೆಂಟ್ ಇಂಡಿಯನ್ ಮ್ಯಾಥೆಮೆಟಿಕ್ಸ್ (1967) ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು. ಇದರ ತರುವಾಯ ಇವರು ಖಗೋಳಶಾಸ್ತ್ರವನ್ನು ಕುರಿತು ಉಪನ್ಯಾಸಗಳನ್ನು ನೀಡಿ ಅದನ್ನು ಮುಂದೆ ಪುಸ್ತಕರೂಪದಲ್ಲಿ ಹೊರತಂದರು. ಮೈಸೂರು ವಿಶ್ವವಿದ್ಯಾನಿಲಯ ಹೊರತಂದ ಪ್ರಚಾರೋಪನ್ಯಾಸ ಮಾಲೆಯ ಮೊದಲ ಪುಸ್ತಕ “ಖಗೋಳಶಾಸ್ತ್ರ ಪ್ರವೇಶ.” ಆಧುನಿಕ ವಿಜ್ಞಾನದ ಪರಿಕಲ್ಪನೆಗಳನ್ನಾಗಲೀ ಶಾಸ್ತ್ರಜ್ಞಾನವನ್ನಾಗಲೀ ಗಣಿತದಂಥ ಶಾಸ್ತ್ರೀಯ ವಿಷಯಗಳನ್ನಾಗಲೀ ಕನ್ನಡದಲ್ಲಿ ಮಂಡಿಸುವುದು ಸಾಧ್ಯವೇ ಇಲ್ಲ ಎಂದು ವಿದ್ವಾಂಸರು ತಿಣುಕುತ್ತಿದ್ದ ಕಾಲಕ್ಕೆ ಇವರ ಸಾಧನೆ ಮಹತ್ತ್ವದ್ದಾಗಿತ್ತು. 

	ಭಾರತೀಯ ಗಣಿತಕ್ಕೆ ವಿಶೇಷವಾಗಿ ಖಗೋಳವಿಜ್ಞಾನಕ್ಕೆ ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ದ್ವಾರಕಾ ಶಂಕರಾಚಾರ್ಯರು ಸ್ಥಾಪಿಸಿದ ಅಖಿಲ ಕರ್ನಾಟಕ ಜ್ಯೋತಿಷಿಕ  ಸಂಘದ ತೃತೀಯ ಸಮ್ಮೇಳನದ ಅಧ್ಯಕ್ಷಸ್ಥಾನ (1947); ಇದೇ ಸಂದರ್ಭದಲ್ಲಿ ದ್ವಾರಕ ಶಂಕರಾಚಾರ್ಯರು ಇವರಿಗೆ ಗಣಿತ ಕಳಾನಿಧಿ ಬಿರುದನ್ನೂ ಪ್ರದಾನಮಾಡಿದರು. ಭಾರತದ ಗಣಿತ ವಿದ್ವಾಂಸರಿಗೆ ಪರಮ ಪ್ರತಿಷ್ಠಿತ ಎಂದು ಕಂಡಿರುವ ಭಾರತೀಯ ಗಣಿತಸಂಘದ ವಾರ್ಷಿಕ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಆಂಧ್ರದ ವಾಲ್ಟೇರಿನಲ್ಲಿ ನೀಡಲಾಯಿತು (1962). ಕನ್ನಡ ಸಾಹಿತ್ಯ ಪರಿಷತ್ತಿನ ಚಿನ್ನದ ಹಬ್ಬದ ಸಂದರ್ಭದಲ್ಲಿ (1970) ಇವರ ವಿಜ್ಞಾನವಾಙ್ಮಯದ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಕನ್ನಡ ವಾಲ್ಮೀಕಿ ರಾಮಾಯಣದ ಕರ್ತೃವಾದ ಇವರನ್ನು ಕನ್ನಡದ ಜನತೆ ಕನ್ನಡ ವಾಲ್ಮೀಕಿ ಎಂದೇ ಗುರುತಿಸಿದೆ. ಮೂಲ ವಾಲ್ಮೀಕಿ ರಾಮಾಯಣದ ಪದಶಃ ಕನ್ನಡ ಅನುವಾದವಿದು. ಸು. 32 ವರ್ಷ ಕಾಲ ಇವರು ಅಧ್ಯಾಪನ ವೃತ್ತಿಯಲ್ಲಿ ಕ್ರಿಯಾಶೀಲವಾಗಿ ಸೇವೆಸಲ್ಲಿಸಿದ್ದಾರೆ. 1938ರಲ್ಲಿ ಗಣಿತ ಪ್ರಾಧ್ಯಾಪಕರಾಗಿ, 1955ರಲ್ಲಿ ಸೆಂಟ್ರಲ್ ಕಾಲೇಜಿನ ಪ್ರಾಚಾರ್ಯರಾಗಿ, 1955ರಿಂದ 58ರ ತನಕ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿ, 1963ರ ತನಕ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಗಣಿತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. 1963-65ರ ಎರಡು ವರ್ಷ ಅಲ್ಲಿಯೇ ಯುಜಿಸಿ ಪ್ರಾಧ್ಯಾಪಕರಾಗಿದ್ದರು. ಮತ್ತೆ 1966-67ರ ಎರಡು ವರ್ಷಗಳ ಕಾಲ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪಠ್ಯಪುಸ್ತಕ ಸಮಿತಿಯ ಗಣಿತ ವಿಭಾಗದ ಸದಸ್ಯರಾಗಿದ್ದರು (1967-72). ಆಧುನಿಕ ಬೀಜಗಣಿತದ ಮೇಲೆ ಒಂದು ಮೌಲಿಕ ಆಕರಗ್ರಂಥ ರಚಿಸಿಕೊಟ್ಟರು. 

	ಆಧುನಿಕ ಕನ್ನಡ ವಿಜ್ಞಾನ ವಾಙ್ಮಯ ನಿರ್ಮಾಪಕರ ಸಾಲಿನಲ್ಲಿ ಇವರದು ಹಿರಿಹೆಸರು. ವಿಷಯ ಯಾವುದೇ ಇರಲಿ, ಪರಿಕಲ್ಪನೆ ಎಷ್ಟೇ ಸಂಕೀರ್ಣವಾಗಿರಲಿ, ಬಲ್ಲವ ಅದನ್ನು ಇತರರಿಗೆ ತಿಳಿಯ ಹೇಳುವಾಗ ಭಾಷಾಪ್ರತಿಬಂಧನ ಖಂಡಿತವಾಗಿಯೂ ಎದುರಾಗುವುದಿಲ್ಲ, ಎದುರಾಗಬಾರದು ಎಂಬುದು ಇವರ ದೃಢನಂಬಿಕೆ. ಇದರ ಪ್ರಾಯೋಗಿಕ ನಿದರ್ಶನ ಇವರು ಕನ್ನಡದಲ್ಲಿ ಬರೆದಿರುವ ಹಲವಾರು ಉತ್ತಮ ಗ್ರಂಥಗಳು. 1970ರಲ್ಲಿ ಇವರು ಬರೆದು ಓದಿದ “ಕನ್ನಡ ಪಾರಿಭಾಷಿಕ ಶಬ್ದಗಳ ಸಮಸ್ಯೆ” ಎಂಬ ಪ್ರಬಂಧದಲ್ಲಿ “ನಾವು ಗಮನಿಸಬೇಕಾದುದು ಪಾರಿಭಾಷಿಕ ಶಬ್ದಗಳ ಸಮಸ್ಯೆಯನ್ನಲ್ಲ, ಭಾಷೆಯನ್ನು ಸರ್ವತೋಮುಖ ವಾಗಿ ಬೆಳೆಸುವ ಸಮಸ್ಯೆ ಎಂದು ನನ್ನ ಅಭಿಪ್ರಾಯ” ಎಂದು ಹೇಳಿದ್ದಾರೆ. ಭಾಷೆ ಬೆಳೆದರೆ ಈ ಕಾಲ್ಪನಿಕ ಸಮಸ್ಯೆ (ಪಾರಿಭಾಷಿಕ ಶಬ್ದಗಳ ಅಭಾವ) ತಾನಾಗಿಯೇ ಪರಿಹಾರವಾಗುವುದೆಂಬುದೂ ಇವರ ಪ್ರತ್ಯಕ್ಷಾನುಭವ. 

	ಕನ್ನಡ ವಿಶ್ವಕೋಶ ಗಣಿತ ಉಪಸಮಿತಿಯ ಅಧ್ಯಕ್ಷರಾಗಿದ್ದ ಇವರು  ಆಲೇಖ್ಯವನ್ನು ಸಿದ್ಧಪಡಿಸುವಲ್ಲಿ ಮತ್ತು ಅದನ್ನು ಕಾರ್ಯಗತಗೊಳಿಸುವಲ್ಲಿ ಅಮೂಲ್ಯ ದಿಗ್ದರ್ಶನ ನೀಡಿದ್ದಾರೆ. ಇವರು ವಿಶ್ವಕೋಶಕ್ಕಾಗಿ ಸ್ವತಃ ಬರೆದಿರುವ ಹಾಗೂ ಅನುವಾದಿಸಿರುವ ಲೇಖನಗಳೂ ಸಂಪಾದಿಸಿ ಪರಿಷ್ಕರಿಸಿರುವ ಇತರರ ಲೇಖನಗಳೂ ವಿಶೇಷ ಕೊಡುಗೆಗಳು.		
	(ಜಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ